Thursday, March 20, 2008

City Marriage

ಲವ್ ಮ್ಯಾರೆಜ್, ಆರೇಂಜ್ಡ್ ಮ್ಯಾರೇಜ್ ಕೇಳಿದ್ವಿ ಇದ್ಯವ್ದು ಹೊಸಾ ಥರದ್ದು ಅಂತ ಆಶ್ಚರ್ಯ ಪಡಬೇಕಿಲ್ಲ. ಇದೂ ಅವೆರಡರಲ್ಲಿ ಒಂದು.
ನಮ್ಮ್ ಆಫೀಸ್ ಎದುರು ಇರುವ ಕಲ್ಯಾಣ ಮಂಟಪದಲ್ಲಿ (ಚೌಲ್ಟ್ರಿ) ಸಾಧಾರಣಾವಾಗಿ 2-3 ದಿನಕ್ಕೊಂದು ಮದುವೆ ಇದ್ದದ್ದೆ. ಇವತ್ತೂ ಯಾವುದೋ ಒಂದು ಮದುವೆ ನಡೆಯುತ್ತಿದೆ. ಆಗೆಲ್ಲಾ ನಮ್ಮ ಹಳ್ಳಿ ಕಡೆಯ ಮದುವೆ ಮನೆ ನೆನಪಾಗುತ್ತದೆ.

ಸುಮಾರು 20 ವರ್ಷದ ಹಿಂದೆ.
ನಮ್ಮೂರು ಸುಮಾರು 10-12 ಕುಟುಂಬಗಳಿರುವ ಒಂದು ಸಣ್ಣ ಊರು. ನಮ್ಮೂರಲ್ಲಿ ಮದುವೆ ಒಂದು ಮನೆಯ ಕಾರ್ಯಕ್ರಮವಾಗಿರುತ್ತಿರಲಿಲ್ಲ. ಅದು ಇಡೀ ಊರಿನ ಹಬ್ಬದಂತಿರುತ್ತಿತ್ತು. ಮದುವೆ ತಾರೀಖು ನಿಶ್ಚಯವಾದ ದಿನವೇ ಮನೆಯ ಯಜಮಾನು ಬಂದು ಎಲ್ಲ ವಿಚಾರಗಳನ್ನೂ ಹೇಳಿದ. ಅಲ್ಲೇ ಅಡ್ಡಾದುತ್ತಿದ್ದ ನನಗೆ "ಅಪ್ಪೀ ಮುಂದಿನ ತಿಂಗ್ಳು ಯಮ್ಮನೆ ಅಪ್ಪಿದು ಮದ್ವೆ. ನಿಂಗೆ ಪರೀಕ್ಷೆ ಎಲ್ಲಾ ಮುಗ್ದಿರ್ತು ಅಲ್ದಾ ಅಶ್ಟೋತ್ತಿಗೆ ಇಲ್ದಿದ್ರೆ ನಿಮ್ಮ ಮೇಷ್ಟ್ರಿಗೆ ಹೇಳು 4 ದಿನ ರಜ ಬೇಕು ಅಂತ" ಅಂದ. ಅವತ್ತಿಂದನೇ ಮನೆಯಲ್ಲೆಲ್ಲ ಏನೋ ಒಂದು ತರದ ಸಡಗರ.
"ಹೆಬ್ಬಗಿಲು ಕಟ್ಟೆ ಸರಿ ಮಾಡ್ಸವು, ಗ್ವಾಡಿಗೆ ಸುಣ್ಣಹಚ್ಸವು, ಭಟ್ರಮನೆ ಮಾಣಿದು ಮದ್ವೆ ಇದ್ದು ಮುಂದಿನ ತಿಂಗ್ಳು. ಹಂಗಾಗಿ ಅಡ್ಕೆ ಸುಲಿಯಕ್ಕೆ ಬರಕ್ಕೆ ಹೇಳವು. ಅಡ್ಕೆ ಎಲ್ಲಾ ಶೆರ್ವೆ ಮಾಡಿದ್ರೆ ಚೊಕ್ಕ ಆಗ್ತು ಇಲ್ದಿದ್ರೆ ಮನೆಯೆಲ್ಲ ಧೂಳು ಹರ್ಗಾಣ" ಅಂತ ಅಪ್ಪ, "ಅವ್ರ ಮನೆಲಿ ಮದ್ವೆ ಬಂತಲೇ ಹಂಗಾಗಿ ಕಾಳ್ಕಡಿಯೆಲ್ಲಾ ಬೇಗ ತರ್ಸಿ ಸೇರ್ಸಿ ಇಡವು. ಕೊನಿಗೆ ಮಳೆ ಹಿಡ್ಕಂಡ್ರೆ ಕಷ್ಟ" ಅಂತ ಅಮ್ಮ ಮದುವೆ ತಯಾರಿಯಲ್ಲಿದ್ದರೆ, ಮದ್ವೆ ಮನೆಗೆ ಅವ್ರ ಮನೆ ಮೊಮ್ಮಕ್ಕಳೆಲ್ಲ ಬರ್ತ ಎಲ್ಲಾ ಸೇರ್ಕಂಡು ಎನ್ ಮಾಡದು ಅನ್ನೋ ಪ್ಲಾನ್ ನನ್ದು.

ಮದುವೆ ದಿನಗಳು ಹತ್ತಿರ ಬರುತ್ತಿದ್ದಂತೆ ಊರೆಲ್ಲಾ ಸಡಗರ, ಎಲ್ಲರ ಮನೆಯೆದುರು ಕಸಕಡ್ಡಿ ಗುಡಿಸಿ, ಸಾರಿಸಿ ಸ್ವಚ್ಚವಾಗಿತ್ತು. ಭಟ್ರ ಮನೆಯೆದುರು ಅಡಿಕೆ ಮರ ಸೋಗೆಯ ಚಪ್ಪರ, ಹಿತ್ತಲ ಅಂಗಳದಲ್ಲಿ ಡೊಡ್ಡ ಊಟದ ಚಪ್ಪರ ರೆಡಿಯಾಗಿತ್ತು. ಆ ಚಪ್ಪರದಲ್ಲೇ "ಅಲ್ಲಿ ಓಡಡಿ ಇವತ್ತಶ್ಟೇ ತೊಡದ್ದ ಜಾರ್ಕ್ಯಂದು ಬೀಳ್ತಿ" ಅಂತ ಬಯ್ಯುವವರ ಮಧ್ಯೆ ನಮ್ಮ ಕಂಬಕಂಬದಾಟ.

ಮದುವೆ ಮನೆಯಲ್ಲಿ ಮದುವೆಯ ಹಿಂದಿನದಿನದ "ದೊನ್ನೆ ಬಾಳೆ" ಕಾರ್ಯಕ್ರಮದ್ದು ತನ್ನದೇ ಆದ ವಿಶೇಷತೆ. ಊರ ಗಂಡಸರೆಲ್ಲಾ ಸೇರಿ ಬಾಳೆಯೆಲೆಗಳನ್ನು ಸರಿಪಡಿಸುವುದು, ಅಡಿಕೆ ಕತ್ತರಿಸುವುದು ಅದಾದ ಮೇಲೆ ಅವಲಕ್ಕಿ, ಕಷಾಯದ ಸಮಾರಾಧನೆ. ಆ ಸಮಯಕ್ಕೆ ಸರಿಯಾಗೆ ನಾವೆಲ್ಲಾ ಆಟ ಮುಗಿಸಿ ಹಾಜರ್.

ಮುಂದಿನದು ದಿಬ್ಬಣ. "ಅಪ್ಪೀ ಬೇಗ ಮಲ್ಗು. ಬೆಳಿಗ್ಗೆ ಬೇಗ ಏಳವು. 7ಘಂಟೆಗೇ ದಿಬ್ಬಣ ಬಸ್ಸು ಹೊರ್ಡ್ತು. ಬೇಗ ಎದ್ರೆ ಸ್ನಾನ ಇಲ್ದಿದ್ರೆ ಇಲ್ಲೆ" ಅನ್ನೋ ವಾರ್ನಿಂಗ್ ರಾತ್ರಿಯೇ ಆಗಿತ್ತು. ಅಂತೂ ಬೇಗ ಎದ್ದು ಸ್ನಾನ ಮಾಡಿ 6 ಘಂಟೆಗೆ ದಿಬ್ಬಣದ ಬಸ್ಸಿನ ದಾರಿ ಕಾಯುವುದು ಯಾಕೆಂದರೆ ಮುಂದಿನ ಸೀಟಿಗಾಗಿ ತುಂಬಾ ಕಾಂಪಿಟೇಶನ್ ಇತ್ತು. ದಿಬ್ಬಣವೇ ಒಂದು ಮಜ. ನಾನಾ ಬಗೆಯ ಹಾಡುಗಳು, ಹಿಂದೆ ಕುಳಿತ "ಡೊಡ್ಡ ಹುಡುಗರ" ಪೋಲಿ ಜೋಕುಗಳು, ಮುಂದೆ ಕುಳಿತ ನಮ್ಮ ಕೂಗಾಟ, ಚಳ್ಳೆ ಪಿಳ್ಳೆ ಹುಡುಗರ ರಗಳೆ, ಹೆಣ್ಣುಮಕ್ಕಳ ಹಾಡು, ಅಮ್ಮುಮ್ಮ ಅಜ್ಜಿಯರ ಮಾತು ಇವುಗಳ ನಡುವೆ ದಾರಿ ಸಾಗಿದ್ದೇ ಗೊತ್ತಾಗುವುದಿಲ್ಲ.
ಮದುವೆಮನೆಗೆ ಬಂದ ಮೇಲೆ ತಿಂಡಿ,ಕಾಫಿ,ಟೀ,ಶರಬತ್ ಗಳ ಸೇವೆ. ಅಲ್ಲೆ ನಮ್ಮ ಶರಬತ್ ಕುಡಿಯುವ ಕಾಂಪಿಟೇಶನ್."ಜಾಸ್ತಿ ಕುಡಿಯಡ ಥಂಡಿ ಆಗ್ತು, ಅಲ್ದೇ ಊಟ ಸೇರದಿಲ್ಲೆ" ಅನ್ನುವ ಬುದ್ದಿಮಾತು ಕಿವಿಗೆ ಬೀಳುವುದು ಅಪರೂಪ. ಯಾಕೆಂದರೆ ಬೇರೆಯವರ ಮನೆಗೆ ಹೋದಾಗ ಬಯ್ಯುವುದಿಲ್ಲ "ಖರ್ಚಿಗೆ" ಬೀಳುವುದಿಲ್ಲವೆಂಬ ಮೊಂಡು ಧೈರ್ಯ.
ಮುಂದಿನದು ಊಟ. ಅಲ್ಲೂ ಸ್ವೀಟ್ ತಿನ್ನುವ, ಗ್ರಂಥ ಹೇಳಿದರೆ ಯಾರು ದೊಡ್ಡದಾಗಿ ಜಾಸ್ತಿ ಹೊತ್ತು "ಹರ ಹರ ಮಹದೇಏಏಏಏಏ.......ವ" ಹೇಳುವುದು ಅಂತ ಕಾಂಪಿಟೇಶನ್. ಊಟ ಮಾಡಿದಮೇಲಿನ ಗಮನವೆಲ್ಲಾ ವಾಪಾಸ್ ಬರುವುದರ ಮೇಲೆ.

ಮರುದಿನದ ಕಾರ್ಯಕ್ರಮ "ವಧೂ/ಗೃಹ ಪ್ರವೇಶ". ನಂತರ "ಮರುವಾರಿ".
ಹೀಗೆ "ನಾಂದಿ", "ಮದುವೆ",ವಧೂ/ಗೃಹ ಪ್ರವೇಶ","ಮರುವಾರಿ" ಅಂತೆ 4-5 ದಿನಗಳು ಸಂಭ್ರಮದಿಂದ ನಡೆಯುತ್ತಿತ್ತು. ಈಗ ಮದುಮಕ್ಕಳು ಬಂದಮೇಲೆ XYZ weds XYZ. XYZ ಕುಟುಂಬದವರಿಂದ ಸ್ವಾಗತ ಎಂಬ ಹೂವಿನ ಬೋರ್ಡ್ ಹಾಕಿ, ಊಟ ಮುಗಿದು ಮದುಮಕ್ಕಳು ಇನ್ನೂ ಇರುವಾಗಲೇ ಮತ್ತೊಂದು ಮದುವೆಯ ಬೋರ್ಡ್ ಹಾಕಲು ಸಿದ್ದತೆ ನಡೆದಿರುತ್ತದೆ.

4-5 ದಿನ ಮದುವೆ ಮಾಡಿಕೊಳ್ಳೋಕೆ ಟೈಮ್ ಇಲ್ಲ ಸಾರ್...

ನಿಜ. ವೇಗವಾಗಿ ಓಡುತ್ತಿರುವ ನಮ್ಮ ಜೀವನದಲ್ಲಿ ಮದುವೆಯೆಂಬ ಅತ್ಯಂತ ಅಮೂಲ್ಯವಾದ ಕಾರ್ಯಕ್ರಮಕ್ಕಾಗಿ 4-5 ದಿನಗಳನ್ನು "ವೇಸ್ಟ್" ಮಾಡಲು ನಾವು ಸಿದ್ದರಿಲ್ಲ. ಇದರೊಂದಿಗೆ 'ವೆಡ್ಡಿಂಗ್','ಮ್ಯಾರೇಜ್','ರಿಸೆಪ್ಶನ್'ಗಳ
ನಡುವೆ ನಾವು 'ಚಪ್ಪರ', 'ತೋರಣ','ಕೋರಿ ಊಟ', 'ಅರಿಸಿನ ಸ್ನಾನ', 'ಹಾನ', 'ನಾಂದಿ', 'ಗೃಹ ಶಾಂತಿ', 'ಉದಕ ಶಾಂತಿ', 'ದೊನ್ನೆ-ಬಾಳೆ', 'ಮರುವಾರಿ', 'ಓಕಳಿ' ಮುಂತಾದ ಶಬ್ದಗಳ ಅರ್ಥವನ್ನೇ ಮರೆತರೂ ಆಶ್ಚರ್ಯವಿಲ್ಲ.

ಓಹ್ ಮದುವೆ ಮುಗಿದಿರಬೇಕು, ಒಂದೆರಡು ಕಾರುಗಳು ಮಾತ್ರ ಕಾಣುತ್ತಿದೆ. ಬೋರ್ಡ್ ಕೆಳಗಿಳಿದಿದೆ, 2-3 ಜನ ಹೂವುಗಳನ್ನು ಕೀಳುತ್ತಿದ್ದಾರೆ, ಪಕ್ಕದಲ್ಲೇ ಮತ್ತೊಂದು ಬೋರ್ಡ್ ತಯಾರಾಗುತ್ತಿದೆ.

Thursday, May 17, 2007

ಚೌ(ಕ್ಷೌ?)ರದ ಬಂಗಾರಪ್ಪ.

ಯಾಕೋ ತಲೆ ಭಾರ ಅನಿಸುತ್ತಿತ್ತು। ಬುದ್ದಿ ಹೆಚ್ಚಾಗುತ್ತಿರಬಹುದೇನೋ ಅಂದ್ಕೋತಿದ್ದೆ. "ಅದೇನದು ಕರಡಿ ತಲೆ ಆಯ್ದು॥ ಹೇರ್ ಕಟ್ ಮಾಡಿಸ್ಕಂಡು ಬನ್ನಿ, ಅಥ್ವಾ ಹಿಪ್ಪಿ ಬಿಡ ಪ್ಲಾನ್ ಎನದ್ರು ಇದ್ದಾ " ಅಂತ ಅರ್ಧಾಂಗಿ ಕೇಳಿದಾಗಲೇ ಗೊತ್ತಾಗಿದ್ದು ಬಂದಿದ್ದು ಬುದ್ದಿಯಲ್ಲ ತಲೆತುಂಬ ಕೂದಲು ಅಂತ. ಸರಿ ಅಂತ ಭಾನುವಾರ ಬೆಳಿಗ್ಗೆ ಕಟ್ಟಿಂಗ್ ಶಾಪ್ ಗೆ ಹೋದೆ. ಯಥಾಪ್ರಕಾರ ಅಲ್ಲೂ ರಷ್. ತಿರುಪತಿ ಹತ್ತಿರ ಇದ್ರೂ, ಶಾಪಿಂಗ್ ಮಾಲ್, ಡಿಸ್ಕೌಂಟ್ ಸೇಲ್ ಗಳಲ್ಲಿ ಜನರು ತುಂಬಿದ್ದರೂ ಚೌರದಂಗಡಿ ಇಷ್ಟು ಜನ ಇರ್ತಾರೆ ಅಂದ್ರೆ ನಂಬೋದೆ ಕಷ್ಟ ಬಿಡಿ. ಬಹುಷಃ ಅವರವರ ಪಾಲಿದನ್ನು ಅವರವರು ಕೆತ್ತಿಕೊಳ್ಳುತ್ತಿರಬೇಕು.ಹತ್ತರಲ್ಲಿ ಹನ್ನೊಂದನೆಯವನಾಗಿ ಅವನ ಹಾಕಿದ ಯಾವುದೋ ತಮಿಳು ಚಾನೆಲ್ ನೋಡುತ್ತಾ ಇದ್ದ ಸಣ್ಣ ಜಾಗದಲ್ಲಿ ಅಡ್ಜೆಸ್ಟ್ ಮಾಡಿಕೊಂಡು ಕುಳಿತೆ.4-5 ಜನರಿಗೆ ಒಮ್ಮೆಲೆ ಹೇರ್ ಕಟ್ ಮಾಡುವ ವ್ಯವಸ್ಥೆ ಇತ್ತು, ತಣ್ಣನೆಯ ಏಸಿ, ಟಿವಿ, ಚೊಕ್ಕನೆಯ ನೆಲ.. ಎಲ್ಲಾ ನೋಡಿ ಜೇಬನ್ನು ಮತ್ತೆ ತಡವಿ ನೋಡಿಕೊಂಡೆ. ಅಷ್ಟರಲ್ಲಿ ಒಬ್ಬನ ಚೌರಸೇವೆ ಮುಗಿದಿತ್ತು. ಇನ್ನೂ ಗೇಣುದ್ದ ಕೂದಲು ತಲೆಮೇಲೇ ಇತ್ತು, ನೆಲದಮೇಲೆ ಒಂದು ಗುಪ್ಪೆ ಕೂದಲು ಬಿದ್ದಿತ್ತು, ಹಾಗದರೆ ಮೊದಲು ಎಷ್ಟಿರಬಹುದು ಎಂದು ಯೋಚಿಸಲು ಸಾಧ್ಯವಾಗಲಿಲ್ಲ. ಯಾಕೆಂದರೆ ಕರಡಿಗಿಂತ ಉದ್ದ ಕೂದಲಿರುವ ಪ್ರಾಣಿಯನ್ನು ನಾನು ನೋಡಿರಲಿಲ್ಲ. ಆ ಅವಕಾಶ ಸ್ವಲ್ಪದರಲ್ಲೇ ತಪ್ಪಿತ್ತು.ಸಣ್ಣ ಹುಡುಗನೊಬ್ಬ 7-8 ವರ್ಷವಿರಬಹುದು ಅವನ ಅಪ್ಪನ ಜೊತೆ ಬಂದಿದ್ದ. ಆಕಡೆ ಈಕಡೆ ತಿರುಗಾಡುತ್ತ ಎಲ್ಲವನ್ನೂ ಕುತೂಹಲದಿಂದ ನೋಡುತ್ತಿದ್ದ. ಅವನನ್ನು ನೋಡಿದಾಗ ನೆನಪಾಗಿದ್ದು ನಾನು ಸ್ಕೂಲಿಗೆ ಹೋಗುತ್ತಿದ್ದಾಗ ಚೌರ ಮಾಡಿಸುತ್ತಿದ್ದ ಕಥೆ.

ಮುಂದಿನ ಕಥೆ ಈಸ್ಟ್ ಮನ್ ಕಲರ್ ನಲ್ಲಿ:



ಆಗ ಚೌರ ಮಾಡಿಸುವುದೆಂದರೆ ಒಂದು ತರಹದ ಹಿಂಸೆ, ಈಗಿರುವ ಹೇರ್ ಸ್ಟೈಲ್ ಹಾಳಾಗುತ್ತದೆಂಬ ಅಳುಕು।"ಹೀಂಗೇ ಹಿಪ್ಪಿ ಬಿಟ್ಕಂಡಿದ್ರೆ ತಲೇಲಿ ಹೇನಿಗೆ ಮೀಸೆ ಬರ್ತು ನೋಡು ಮತ್ತೆ" ಅಂತ ಬೈಸಿಕೊಂಡಮೇಲೆ ಚೌರಕ್ಕೆ ರೆಡಿಯಾಗುತ್ತಿದ್ದದ್ದು.

ಚೌರ ಈಗಿನಂತೆ ಯಾವತ್ತಾದರೂ ಆಗುತ್ತಿರಲಿಲ್ಲ। ಭಾನುವಾರವೇ ಬರಬೇಕು, ಕಾಸರಗುಪ್ಪೆ ಬಂಗಾರಪ್ಪನೇ ಬರಬೇಕು. ಅವನು "ಭಾನುವಾರದ ಬಂಗಾರಪ್ಪ" ಎಂದೇ ಫೇಮಸ್। ಚೌರ ಮಾಡುವವನೇ ಮನೆಗೆ ಬಂದು ಚೌರ ಮಾಡುವುದು ಬಹುಷಃ ಬೆಂಗಳೂರಿನವರಿಗೆ "ಹೀಗೂ ಉಂಟೇ" ಅನ್ನಿಸಬಹುದು.

ಭಾನುವಾರ ಬೆಳಿಗ್ಗೆ ತಿಂಡಿ ತಿಂದಾದಮೇಲೆ ಬಂಗಾರಪ್ಪನಿಗೆ ಕಾಯುವುತ್ತಾ ಮನೆಯ ಹೊರಗಡೆ ಕಟ್ಟೆಮೇಲೆ ಕೂರುವುದರಿಂದ ಚೌರ ಕ್ರಮ ಶುರುವಾಗುತ್ತಿತ್ತು। "ಇನ್ನೂ ಯಂತಕ್ಕೋ ಬರ್ಲೇ ಇಲ್ಯಪ್ಪ ಬಪ್ದಿಲ್ಲೆ ಕಾಣ್ತು" ಅಂತ ಒಳಹೊರಗೆ ತಿರುಗಾಡುವುದು, "ಹೋಗಿ ಹೊರ್ಗಡೆ ಕೂತ್ಗ, ಅವ ಹಂಗೇ ಹೋಗಿಬಿಡ್ತ" ಅಂತ ಹೇಳಿಸಿಕೊಳ್ಳುವುದೂ ನಡೆಯುತ್ತಿತ್ತು.

ಬೆಳಿಗ್ಗೆ 9:00ರಿಂದ ಕಾದರೆ, 11 11:30ಕ್ಕೆ ಬಂಗಾರಪ್ಪ ಬರುತ್ತಿದ್ದ. ಒಳಗೆ ಓಡಿಹೋಗಿ ಒಂದು ಚೆಂಬು ನೀರು ತರುವಷ್ಟರಲ್ಲಿ ಬಂಗಾರಪ್ಪ ಕಟ್ಟೆ ಮೇಲೆ ತನ್ನ ಚೀಲ ಬಿಚ್ಚಿ, "ಹತಾರ" ಗಳನ್ನು ರೆಡಿಮಾಡಿ ಕೂತಿರುತ್ತಿದ್ದ. ಅಂಗಿ ತೆಗೆದುತಲೆಯನ್ನು ಅವನಿಗೊಪ್ಪಿಸಿ ಕೂತರೆ ಆಯಿತು, ಮುಂದಿನದು ಕತ್ತರಿ, ಹಣಿಗೆಗಳ ನರ್ತನ. ಚೆಂಬಿನಿಂದ ನೀರುತೆಗೆದು ತಲೆಗೆ ಹಚ್ಚಿ, ಕತ್ತರಿ ತೆಗೆದನೆಂದರೆ ಒಂದು ರೀತಿಯ ನಡುಕ. ಕತ್ತರಿಯ ಕಚ..ಕಚ..ಶಬ್ದವೇ ಹೆದರಿಕೆ ಹುಟ್ಟಿಸುವಂತಹುದು. ನಿರ್ಜೀವ ಕತ್ತರಿ ಬಂಗಾರಪ್ಪನ ಕೈಯಲ್ಲಿ ಹಸಿದ ಮೊಸಳೆ ಬಾಯ್ತೆರೆದಂತೆ ಕಾಣುತ್ತಿತ್ತು. ಮತ್ತೆ ಅದು ಸುಮ್ಮನಾಗುವುದು ನೆಲದ ಮೇಲಿಟ್ಟಾಗ ಮಾತ್ರ. ಕೂದಲನ್ನು ಕತ್ತರಿಸದಿದ್ದಾಗಲೂ ಗಾಳಿಯನ್ನು ಕತ್ತರಿಸುವಂತೆ ಶಬ್ದ ಮಾಡುವುದು ಆ ಕತ್ತರಿಯ ಮಹಿಮೆಯೋ ಅಥವಾ ಬಂಗಾರಪ್ಪನ ಕೈಚಳಕವೋ ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ.ಈ ನಡುವೆ "ಸ್ವಲ್ಪ ಉದ್ದ ಇರಲಿ" ಅಂತ ಮೆಲ್ಲನೆ ಹೇಳುವುದೂ, "ಸರೀ ಗಿಡ್ಡ ಹೊಡಿ, 3 ತಿಂಗ್ಳು ಬರ್ಬಾರ್ದು ಮತ್ತೆ" ಅಂತ ಅಪ್ಪ ಹೇಳುವುದೂ ನಡೆದೇ ಇರುತ್ತಿತ್ತು. ಚೌರ ಕ್ರಿಯೆಯ ಅಂತಿಮ ಮತ್ತು ಅತ್ಯಂತ ಕ್ರಿಟಿಕಲ್ ಭಾಗವೆಂದರೆ Razor ನದು.ಕತ್ತಿ ತೆಗೆದು ಬ್ಲೇಡ್ ಹಾಕಿದನೆಂದರೆ ಭಯ ನೂರ್ಮಡಿಯಾಗುತ್ತಿತ್ತು. ಲೀಲಾಜಾಲವಾಗಿ ಆಡುವ ಕತ್ತಿಯು ಒಂದು ರೀತಿಯ ಕಚಗುಳಿ ಮಾಡುತ್ತಿತ್ತು. ಆದರೆ ಅಲುಗಾಡುವಂತಿಲ್ಲ, ಅಲುಗಾಡಿದರೆ ಕತ್ತು, ಕಿವಿಗೆ ಮುತ್ತಿಟ್ಟರೆ ಎಂಬ ಭಯ.

ಚೌರವಾದ ನಂತರ ಕೂದಲು ರಾಶಿಯನ್ನು ಗುಡಿಸಿ ಕೆರೇಕೋಡಿಗೆ ಎಸೆದು, ಕಟ್ಟೆಗೆ ನೀರು ಹಾಕಿ ಕ್ಲೀನ್ ಮಾಡುವುದು। ಅಡ್ಡಬಾಗಿಲಿನಿಂದ ಅಥವಾ ಕೊಟ್ಟಿಗೆಯಿಂದ ಬಚ್ಚಲಮನೆಗೆ ಹೋಗಿ, ಬಕೆಟ್ಟಿನಲ್ಲಿ ತೋಡಿಟ್ಟ ನೀರಿನಲ್ಲಿ ಸ್ನಾನ ಮಾಡಿ ಕನ್ನಡಿಯ ಮುಂದೆ ನಿಂತಾಗಲೇ ಸಮಾಧಾನ.

ವಾಸ್ತವಕ್ಕೆ ಬಂದೆ.

ನನ್ನ ಸರದಿ ಬಂದಿತ್ತು। ಹೋಗಿ ಚೇರ್ ಮೇಲೆ ಕುಳಿತೆ, ಕುತ್ತಿಗೆಗೆ ಬಟ್ಟೆಯನ್ನು ಕಟ್ಟಿ,ಗಿಡಗಳಿಗೆ ಔಷಧಿ ಹೊಡೆಯುವ ಸಣ್ಣ ಸ್ಪ್ರೇಯರ್ ನಿಂದ ನೀರು ಹಾಕಿ ತನ್ನ ಕೆಲಸ ಪ್ರಾರಂಭಿಸಿದ. ಚೌರ ಮುಗಿದು 35ರೂ ಕೊಟ್ಟಮೇಲೆ ಅನಿಸುತ್ತಿತ್ತು ಎ.ಸಿ. ಇಲ್ಲದಿದ್ದರೂ, revolving chair ಇಲ್ಲದಿದ್ದರೂ ಬಂಗಾರಪ್ಪ 8-10ರೂಪಾಯಿಗೆ ಮಾಡುತ್ತಿದ್ದ ಚೌರವೇ ಒಂದು ರೀತಿಯಲ್ಲಿ ಚೆನ್ನಾಗಿರುತ್ತಿತ್ತು.

Wednesday, January 03, 2007

ಮರೆಯಲಾಗದ ದಿನ

ಆಲಿಕಲ್ಲು ಮಳೆ ಜೋರಾಗಿ ಬರುತ್ತಿತ್ತು. ಎಲ್ಲಿ ನೋಡಿದರೂ ಬಿಳಿಯ ಬಣ್ಣ. ತಣ್ಣನೆ ಗಾಳಿ ಬೀಸುತ್ಟಿತ್ತು. ಎಲ್ಲಿಯೂ ಮನುಷ್ಯರ ಸುಳಿವಿಲ್ಲ. ಮರಗಟ್ಟಿದ ಕೈಕಾಲುಗಳು, ನಡುಗುತ್ತಿರುವ ಎದೆ,ಏನೇನೋ ಯೋಚನೆಗಳು,ಅದುರುತ್ತಿರುವ ತುಟಿಗಳು...

ಇದು ಯಾವುದೋ ಸಿನಿಮಾ ಕತೆಯಲ್ಲ. ನನ್ನದೇ ಕತೆ.ಹಿಮಾಲಯ ಟ್ರೆಕ್ಕಿಂಗ್ ಎಂದು ಶಿವಮೊಗ್ಗದಿಂದ ಹೊರಟ ಟೀಮ್ ನಲ್ಲಿ ನಾನೂ ಒಬ್ಬ. 9 ದಿನಗಳ ಟ್ರೆಕ್ಕಿಂಗ್ ಕ್ಯಾಂಪ್ ಅದು. ಟ್ರೆಕ್ಕಿಂಗ್ ಉತ್ಸಾಹದಿಂದಲೇ ಪ್ರಾರಂಭವಾಗಿತ್ತು.
ಬೆಳಿಗ್ಗೆ 7:00 - 7:30ಗೆ ಶುರುವಾಗುತ್ತಿದ್ದ ನಮ್ಮ ಪಯಣ ಮುಂದಿನ ಕ್ಯಾಂಪ್ ಸಿಗುವವರೆಗೆ. ಸಾಧಾರಣವಾಗಿ 2:00 - 3:00ಕ್ಕೆ ಮುಗಿಯುತ್ತಿತ್ತು. ನಂತರ ಊಟ, ವಿಶ್ರಾಂತಿ, ಹರಟೆ, ಸುತ್ತಾಟ, ಸಂಜೆಯ ಊಟ, ನಿದ್ದೆ. ಇದು ನಮ್ಮ ದಿನಚರಿಯಾಗಿತ್ತು. ಹಗಲೆಲ್ಲಾ ಸಾಧಾರಣವಾಗಿ 23 - 25 ಡಿಗ್ರಿ ಇರುತ್ತಿದ್ದ temperature ರಾತ್ರಿಯಾಗುತ್ತಿದ್ದಂತೆ 2 - 3 ಡಿಗ್ರಿಗೆ ಬರುತ್ತಿತ್ತು. ಎರಡೆರಡು ರಗ್ಗು ಹೊದ್ದು ಮಲಗಿದರೂ ಗಡಗುಟ್ಟುವ ಚಳಿ.

ಎಂದಿನಂತೆ ಅಂದೂ ಬೆಳಿಗ್ಗೆ ಹೊರಟಾಗ ಘಂಟೆ 7:30ಯಾಗಿತ್ತು. ನಿಧಾನವಾಗಿ ಮೆಲೇರುತ್ತಿದ್ದ ಮೋಡ ಮಳೆಯಗುವಷ್ಟರಲ್ಲಿ ಅರ್ಧ ದೂರ ಮುಗಿದಿತ್ತು. ಮಳೆ ಶುರುವಾಯಿತು. ಅದು ಹಿಮಾಲಯದ ಮಳೆ, ಬೆಂಗಳೂರಿನ ಮಳೆಯಲ್ಲ. ಮಳೆಯೆಂದರೆ ನೀರಿನ ಹನಿಯಲ್ಲ, ಅಲಿಕಲ್ಲು ಬೀಳುತ್ತಿತ್ತು. ನಿಧಾನವಾಗಿ ಪ್ರಾರಂಭವಾದ ಮಳೆ ನೊಡುತ್ತಿದ್ದಂತೆ ಜೋರಾಯಿತು. ಆಲಿಕಲ್ಲು ಬಿದ್ದ ಜಾಗವೆಲ್ಲಾ ಉರಿಯತೊಡಗಿದಾಗ ಎಲ್ಲರೂ ಅಲ್ಲೆ ಒಂದು ಮರದ ಕೆಳಗೆ ನಿಂತರು. ಸ್ವಲ್ಪ ಹೊತ್ತಿನಲ್ಲಿ ಮಳೆ ಕಡಿಮೆಯಾಯಿತು. ಒಬ್ಬೊಬ್ಬರಾಗಿ ಹೊರಟರು. ಎಲ್ಲೆಲ್ಲೂ ಬಿಳಿ ಬಣ್ಣ. ದಾರಿಯೆಲ್ಲಾ ಬಿಳಿಯಾಗಿತ್ತು. ಸುಮಾರು ಅರ್ಧ ಅಡಿಯಷ್ಟು ಮಂಜಿನ ಹಾಸು ಹೊದೆಸಿದಂತಿತ್ತು. ಒಂದು ಕಿಲೋಮೀಟರ್ ನಡೆಯುವಷ್ಟರಲ್ಲಿ ಕೆಲವರು ಮುಂದಾಗಿ, ಕೆಲವರು ಹಿಂದಾಗಿ ನಾನು ಒಂಟಿಯಾಗಿದ್ದೆ.
ಮೈ ಕೊರೆಯುವ ಚಳಿಯಲ್ಲಿ ನಡೆಯುತ್ತಿದ್ದೆ. ನಿಧಾನವಾಗಿ ಕೈಕಾಲುಗಳು ಮರಗಟ್ಟುತ್ತಿತ್ತು. ಮೈಮೆಲಿದ್ದ ಬಟ್ಟೆಗಳೆಲ್ಲ ಸಾಕಷ್ಟು ತೋಯ್ದಿತ್ತು. ಮರಗಟ್ಟಿದ್ದ ಕೈ ಮೇಲೆ control ತಪ್ಪುತ್ತಿತ್ತು. ಕೈ ಯಾವುದೇ ಕೆಲಸ ಮಾಡುವ ಸ್ಥಿತಿಯಲ್ಲಿರಲಿಲ್ಲ. Almost no sensation. ಕಾಲುಗಳು ಯಾಂತ್ರಿಕವಾಗಿ ನಡೆಯುತ್ತಿದ್ದವು. ನಡಿಗೆಯ ಮೇಲೆ ಯವುದೇ control ಇರಲಿಲ್ಲ. ಎಷ್ಟೆಂದರೆ ನಿಲ್ಲುವುದ್ದಕ್ಕೂspeed control ಮಾಡುವುದಕ್ಕೂ ಆಗುತ್ತಿರಲಿಲ್ಲ. ನಿಧಾನವಾಗಿ ಭಯದ ಅರಿವಾಗುತ್ತಿತ್ತು. ಎಲ್ಲೂ ಯಾರೂ ಕಾಣುತ್ತಿರಲಿಲ್ಲ, ಎಲ್ಲೆಲ್ಲೂ ಬಿಳಿಯ ಬಣ್ಣ, ಚಳಿಯ ನಡುಕ, ಮರಗಟ್ಟಿದ ಕೈ ಕಾಲು. ಇದೇಕೋ ಕೊನೆಕಾಣದ ನಡಿಗೆಯೆನಿಸುತ್ತಿತ್ತು.
ಕೊನೆಯ ಕೆಲವು ನಿಮಿಷಗಳು.
ನಿಜ, ನಿಜವಾಗಿಯೂ ನನ್ನ ಕೊನೆಯ ಕ್ಷಣಗಳು ಸಮೀಪಿಸಿದಂತೆ ಅನ್ನಿಸುತ್ತಿತ್ತು. ಆ ಕ್ಷಣದಲ್ಲಿ ಬಂದ ಯೋಚನೆಗಳನ್ನೆಲ್ಲಾ ನೆನೆಪಿಸಿಕೊಳ್ಳಲಾರೆ. ದೇವರು, ಮನೆ, ಅಪ್ಪ, ಅಮ್ಮ...ಎಲ್ಲವೂ ನೆನಪಾಗಿತ್ತು.
ಎಲ್ಲೆಡೆ ನಿಶ್ಯಬ್ದ.
ಮುಂದೇನು ಎನ್ನುವ ಉದ್ವೇಗವಿರಲಿಲ್ಲ. ಎಲ್ಲವೂ ನಿಶ್ಚಿತವೆನಿಸುತ್ತಿತ್ತು. ನಾನಿನ್ನು ಕೆಲವು ನಿಮಿಷಗಳು ಮಾತ್ರ ಎನ್ನುವುದೆ ತೀರ್ಮಾನವಾಗಿತ್ತು.
ಕಹಿಯೋ ಸಿಹಿಯೋ, ಸತ್ಯವನ್ನು ಒಪ್ಪಿಕೊಂಡ ಮನಸ್ಸು ಶಾಂತವಾಗಿತ್ತು. ನಿರ್ಲಿಪ್ತ....
ಬದುಕುವ ಆಸೆ ಕೂಗಿ ಕರೆದಿತ್ತು....!!
ದೂರದಲ್ಲೊಂದು ಸಣ್ಣ ಮನೆ ಕಾಣಿಸಿತ್ತು..!!!

ಓಡಬೇಕೆನಿಸಿದರೂ ಓಡಲಾಗದ ಪರಿಸ್ಥಿತಿ.

ಅಂತೂ ಇಂತೂ ಮನೆ ಸೇರಿದ್ದೆ. ಬೆನ್ನಲ್ಲಿದ್ದ ಬ್ಯಾಗ್ ತೆಗೆಯಲೂ ಆಗದ ಪರಿಸ್ಥಿತಿ ನನ್ನದಾಗಿತ್ತು. ನನಗಿಂತ ಮೊದಲು ಅಲ್ಲಿಗೆ ಬಂದಿದ್ದವರು ನನ್ನ ಬ್ಯಾಗ್ ತೆಗೆದು, ಶೂ, ಸಾಕ್ಸ್ ತೆಗೆದು ಕರೆದುಕೊಂಡು ಹೋಗಿ ಒಲೆ ಎದುರು ಕೂರಿಸಿದಾಗ ಪುನರ್ ಜನ್ಮದ ಅನುಭವವಾಗಿತ್ತು.
ಅದೊಂದು ಮರೆಯಲಾಗದ ದಿನ.

ಮತ್ತೆಂದೂ ಆ ರೀತಿಯ ಮಳೆ ಬರಲಿಲ್ಲ..ಆ ಅನುಭವವೂ...

Thursday, November 30, 2006

ಕಾಡುವ ನೆನಪುಗಳು..

ಸಾಗರದಿಂದ ನಾನು ಹತ್ತಿದ ಬಸ್ಸು ಬೆಂಗಳೂರಿನ ಕಡೆ ಓಡುತ್ತಿತ್ತು. ಮಳೆಯು ಓಡುವ ಬಸ್ಸಿನೊಂದಿಗೆ ಸ್ಪರ್ಧಿಸುವಂತೆ ಹೊಯ್ಯುತ್ತಿತ್ತು. ಮೊದಲಿಂದಲೂ ಮಳೆಗಾಲದ ತಿರುಗಾಟವೆಂದರೆ ಸ್ವಲ್ಪ ಕಷ್ಟದ ಕೆಲಸ. ಆದರೆ ಕರ್ತವ್ಯದ ಕರೆಗೆ ಇಲ್ಲವೆನ್ನಲಾಗದೆ ಸಾಗರದಿಂದ ಬೆಂಗಳೂರಿನ ಬಸ್ ಹತ್ತಿದ್ದೆ. ಮಳೆಗಾಲವಾದ್ದರಿಂದ ಬಸ್ಸಲ್ಲಿ ಸೀಟಿಗೇನೂ ತೊಂದರೆಯಾಗಲಿಲ್ಲ. ನಿದ್ದೆ ಮಾಡೋಣವೆಂದು ಸೀಟಿಗೆ ಒರಗಿ ಕಣ್ಮುಚ್ಚಿದೆ.
ಮಳೆ ಯಾವಾಗಲೂ ಹಿಂದಿನ ನೆನಪನ್ನು ತರುತ್ತದೆಯಂತೆ.ಮಲೆನಾಡ ಮಳೆಗಾಲಕ್ಕೆ ಮೊದಲಿನ ಬಿರುಸು ಈಗಿಲ್ಲದಿದ್ದರೂ ಹೊಯ್ಯುವ ಮಳೆಯ ನೊಡುವುದೇ ಚಂದ.ಸದಾ ಸುರಿಯುತ್ತಿದ್ದ ಸೋನೆ ಮಳೆ, ವಟಗುಟ್ಟುವ ಕಪ್ಪೆಗಳು, ಆ ಮಣ್ಣಿನ ವಾಸನೆ ಇವೆಲ್ಲದರೊಂದಿಗೆ ಬಿಸಿಬಿಸಿ ಕಾಫಿ, ಬೋಂಡ.. ಅನುಭವಿಸಿಯೇ ತಿಳಿಯ ಬೇಕು. ನಿದ್ದೆ ಮಾಡೋಣವೆಂದು ಕಣ್ಮುಚ್ಚಿದರೆ ಮತ್ತೊಂದು ಮಳೆಗಾಲದ ನೆನಪಿನ ಪುಟಗಳು ಕಣ್ಣೆದುರು ಬಂದಂತಾಯಿತು.ಹೌದಲ್ಲವೇ.. ಸರಿಯಾಗಿ 5 ವರ್ಷದ ಹಿಂದಿನ ಮಳೆಗಾಲ.. ಹೊಸ ಜಾಗ, ಹೊಸ ಕಾಲೇಜು,ಹೊಸ ಗೆಳೆಯರ ನಡುವೆ ದಿನ ಕಳೆದದ್ದೇ ಗೊತ್ತಾಗಲಿಲ್ಲ. 32 ಹುಡುಗರಿದ್ದ 40 ಜನರ ನಮ್ಮ ಕ್ಲಾಸಿನಲ್ಲಿ ಹುಡುಗಿಯರ ಪ್ರಪಂಚ ಬಲಭಾಗದ ಮೊದಲೆರಡು ಬೆಂಚಿಗೆ ಸೀಮಿತವಾಗಿತ್ತು. ತಲೆತಗ್ಗಿಸಿ ಕ್ಲಾಸಿಗೆ ಬಂದು ಹೋಗುತ್ತಿದ್ದ ಹುಡುಗಿಯರು ನಮ್ಮೊಂದಿಗೆ ಸಲುಗೆಯಿಂದ ಮಾತಾಡುವಷ್ಟರಲ್ಲಿ ಒಂದು ವರ್ಷ ಮುಗಿದಿತ್ತು.
ಒಹ್.. ಶಿವಮೊಗ್ಗ ಬಂದೇ ಬಿಡ್ತು.. ಲಗೇಜ್ ಲೊಡ್ ಮಾಡುವುದರೊಳಗೆ ಒಂದು ದಮ್ ಹೊಡೆಯೋಣ್ ಅಂತ ಕೆಳಗಿಳಿದೆ. ಈ ಸಿಗರೇಟಿನ ಚಟ ಶುರುವಾಗಿದ್ದು 2ನೆ ವರ್ಷದಲ್ಲಿ. ಮೊದಲಿಗೆ ತಮಾಷೆಗಾಗಿ ಅಂತ ಶುರುವಾಗಿದ್ದು ಹಾಗೇ ಅಂಟಿಕೊಂಡಿದೆ. ಬಿಡಲಾಗದ ಚಟವೆನಲ್ಲ, ಅದರೂ ಬಿಡಲು ಮನಸ್ಸಿಲ್ಲ. ಬೆಚ್ಚನೆಯ ಹೊಗೆ ದೇಹದೊಳಗೆ ಹೋದಂತೆ ಒಂದು ರೀತಿಯ ಖುಷಿ ಕೊಡುತ್ತಿತ್ತು. ಸುರುಳಿಯಾಗಿ ಹೊರ ಬಂದ ಹೊಗೆಯಲ್ಲಿ ಯವುದೋ ಮುಖ ಕಂಡಂತಾದಾಗ ಬೆಚ್ಚಿ ಉಳಿದ ತುಂಡನ್ನು ಎಸೆದು ಬಸ್ ಹತ್ತಿದೆ.
ನಿದ್ದೆ ಮಾಡೊಣವೆಂದರೆ ಲಗೇಜ್ ಲೊಡ್ ಮಾಡುವ ಶಬ್ದ. ನೆನಪಾದ ಮುಖ ಯಾವುದು..?? ಆತ್ಮ ವಂಚನೆಯ ಪರಾಕಾಷ್ಠೆಯಿದು. ಎಂದಾದರೂ ಮರೆಯುವ ಮುಖವೇ ಅದು..?ಅಬ್ಬ.. ಅಂತೂ ಬಸ್ ಹೊರಟಿತು...ಮೊದಲ ವರ್ಷದಂತೆಯೆ ಎರಡನೆ ವರ್ಷವೂ ಇತ್ತು.. ಅಥವಾ ಹಾಗೆ ಅನ್ನಿಸುತ್ತಿತ್ತು. ಎಂದಿನಂತೆ ಇರುತ್ತಿದ್ದ ಅವಳು ನನಗೆ ಅಷ್ಟು ಹತ್ತಿರವಾದದ್ದು ಯಾವಾಗೆಂದು ನಿಜವಾಗಿಯು ಗೊತ್ತಾಗಲಿಲ್ಲ. ಜೊತೆಯಾಗಿ ಮಾಡಿದ ಪ್ರೊಜೆಕ್ಟ್ ಇರಬಹುದೇ.? ಅಥವಾ Notes Exchange..? ಅಥವಾ ಅವಳ ಆ ಮಾತುಗಳು..? ಅಥವಾ ಅವಳ ಮುಗ್ದ ಮನಸು..?? .... ಕೊನೆಕಾಣದ ಪ್ರಶ್ನೆಗಳಿವು..
ಹೀಗೆ ಹತ್ತಿರವಾಗಿದ್ದು ಯಾಕೆ..?? ಏನಿದು..ಸ್ನೇಹವೊ. ಇಲ್ಲಾ.. Love..
ಒಂದು ಕ್ಷಣ ನಡುಗಿದಂತಾಯಿತು. ಕತ್ತಲೆಯಲ್ಲಿ ಯವುದೋ ಗುಂಡಿ ಹಾರಿರಬೇಕು ಬಸ್ಸು.
ನಿಜ. ನಾನದನೆಂದೂ ಯೋಚಿಸಿರಲಿಲ್ಲ, ಸ್ನೇಹ ಪ್ರೇಮವಾಗಿದ್ದು ಯಾವಾಗೆಂದು. ಯೌವ್ವನದ ಆ ರಭಸದ ನಡುವೆ ಅದನ್ನೆಲ್ಲಾ ಯೋಚಿಸಲು ಸಮಯವೆಲ್ಲಿದೆ? ಅಂತೂ ಗೊತ್ತಿಲ್ಲದೆ ಪ್ರಾರಂಭವಾದ ಪ್ರೇಮ ಮುಂದುವರಿದಿದ್ದು ಗೊತ್ತಿರದೆ ಅಲ್ಲ. ವಯಸ್ಸಿನ ಪ್ರಭಾವವಿರಬೇಕು ಹುಡುಗರಿಗೆ ಪ್ರೇಮಿಸುವುದಕ್ಕಿಂತ ಅದನ್ನು ಹೇಳುವುದು ಬಹಳ ಕಷ್ಟದ ಕೆಲಸ. ನಾನು ನನ್ನ ಇಂಗಿತವನ್ನು ಹೇಳಲು ಪರದಾಡ ತೊಡಗಿದೆ.
ಈ ಹುಡುಗರೇ ಹೀಗೆ.ತಮ್ಮ ದೈಹಿಕ ಶಕ್ತಿಯನ್ನು ಆಟೋಟದಲ್ಲಿ ತೋರಿಸುವವರು ಒಬ್ಬ ಹುಡುಗಿಯ ಎದುರಲ್ಲಿ ಇಲಿಯಂತಾಗುತ್ತಾರೆ. ಮಾತಾಡಲಾರದೆ ಒದ್ದಾಡುತ್ತಾರೆ. ನನ್ನಾಸೆಯನ್ನು ಹೇಳಲೆಂದು ಹೋಗಿ, ಹೇಳಲಾಗದೆ ಹಿಂತಿರುಗಿ ಬಂದ ದಿನಗಳೆಷ್ಟೋ.
ಈ ಹುಡುಗಿಯರೂ ಹಾಗೆ. ಹುಡುಗರ ಕಷ್ಟವನ್ನು ಅರ್ಥ ಮಾಡಿಕೊಳ್ಳುವುದಿಲ್ಲವೇಕೆ? ಅವಳೂ ನನ್ನನ್ನು ಪ್ರೀತಿಸುತ್ತಿರಬಹುದೆ..? ಇಲ್ಲದೆ ಮತ್ತೇನು. ಯಾವುದರಲ್ಲಿ ಕಡಿಮೆ ನಾನು? ಅವಳಿಗೂ ನನ್ನಂತೆಯೇ ಹೇಳಲು ಹಿಂಜರಿಕೆಯಿರಬೇಕು. ನೋಡೋಣ, ಅವಳೇ ಮೊದಲು ಹೇಳಲಿ.
ಹೀಗೆಯೇ ಒಮ್ಮೆ ಅವಳು ಹೇಳಲೆಂದೂ, ಅವಳಿಗೆ ಗೊತ್ತಿರಬಹುದೆಂದೂ ಅಥವಾ ನಾನೆ ಹೇಳುತ್ತೇನೆಂದು ಹೇಳಲಾಗದೆ ಬಂದೂ ಸುಮಾರು ಒಂದು ವರ್ಷ ಕಳೆದಿರಬಹುದು. ಪ್ರೇಮದಲೆಯ ಮೇಲೆ ತೇಲುತ್ತಿದ್ದ ನನಗೆ ದಿನಗಳು ಕಳೆದದ್ದೇ ತಿಳಿಯಲಿಲ್ಲ.
ಮೂರನೇ ವರ್ಷ ಮುಗಿಯುವುದರಲ್ಲಿತ್ತು, ಇನ್ನೇನು 2-3 ತಿಂಗಳ ಕಳೆದರೆ ಮುಗಿಯಿತು. ಎಂದಿನಂತೆ ಸಂಜೆ ಸುತ್ತಾಡುತ್ಟಿದ್ದಾಗ ಬಂದಿತ್ತು ಮನಕಲುಕುವ ಆ ಸುದ್ದಿ. ಅವಳ ಮದುವೆ ಮಾಡುತ್ತಾರಂತೆ...
ಬಸ್ಸು ಅರಸೀಕೆರೆ ಡಾಬಾದಲ್ಲಿ ನಿಂತಿತು. ರೋಟಿ ದಾಲ್ ಕೈಬೀಸಿ ಕರೆಯುತ್ತಿತ್ತು. ಯಾವತ್ತು ಆ ಕರೆಯನ್ನು ಕಡೆಗಾಣಿಸಿದವನಲ್ಲ. ಇಂದೇಕೋ ಹಸಿವಿರಲಿಲ್ಲ ಅಥವಾ ತಿನ್ನಬೇಕೆನಿಸಲಿಲ್ಲ.ಆ ದಿನವಿನ್ನೂ ನೆನಪಿದೆ. ಮರೆಯುವುದು ಸಾಧ್ಯವೇ.? ಕೇಳಿದ ಸುದ್ದಿ ನಿಜವಲ್ಲವೆಂದು ಬುದ್ದಿ ಹೇಳುತ್ತಿತ್ತು, ನಿಜವಾಗದಿರಲೆಂದು ಮನಸು ಬೇಡುತ್ತಿತ್ತು.
ಅವಳು ಇದಕ್ಕೆ ಒಪ್ಪಿರ ಬಹುದೇ.? ನನಗೇಕೆ ಹೇಳಲಿಲ್ಲ.? ನನವಳನ್ನು ಪ್ರೀತಿಸುತ್ತಿರುವುದು ಅವಳಿಗೆ ಗೊತ್ತಿಲ್ಲವೇ.? ಅಥವಾ... ಅಥವಾ..ಅವಳು ನನ್ನನ್ನು ಪ್ರೀತಿಸುತ್ತಿರಲಿಲ್ಲವೇ.? ಮುಂದೇನೂ ಯೋಚಿಸಲಾಗಲಿಲ್ಲ.
ರೋಟಿ ತಿಂದವರು,ಕಾಫಿ,ಟೀ ಕುಡಿದವರೆಲ್ಲಾ ಬಂದದ್ದಾಯಿತು. ಸಣ್ಣಗೆ ಜಿನುಗುತ್ಟಿದ್ದ ಮಳೆ ಜೋರಾಗಿತ್ತು. ನಿಧಾನವಾಗಿ ಬಸ್ಸು ಹೊರಟಿತು.
ಅವಳು ನನ್ನ ಪ್ರೀತಿಸುತ್ತಿರಲಿಲ್ಲವೇ.?.. ಈಗಲೇ ಹೋಗಿ ಕೇಳೋಣವೆಂದರೆ ಆಗದ ಮಾತು. ಇಂದಿನಂತೆ ಮೊಬೈಲ್ ಇಲ್ಲದ ಕಾಲವದು. ಬೆಳಗಿನವರೆಗೆ ಸಿಗರೇಟಿನ ಹೊಗೆಯುಗುಳುತ್ತಾ ಕಳೆದೆ. ಜೀವನದ ಅತೀ ಧೀರ್ಘ ರಾತ್ರಿಯದು.
ಬೆಳಿಗ್ಗೆ ಕಾಲೇಜಿನ ಗೇಟ್ ತೆರೆಯಲೆಂದೆ ಬಂದ ವಾಚ್ ಮನ್ ಮುಖದಲ್ಲಿನ ಆಶ್ಚರ್ಯವನ್ನು ಗಮನಿಸುವ ಸ್ತ್ಥಿತಿಯಲ್ಲಿರಲಿಲ್ಲ. ಎಂದಿನಂತೆ ಸರಿಯಾದ ಸಮಯಕ್ಕೆ ಬಂದ ಅವಳ ಮುಖದಲ್ಲಿ ಎಂದಿನಂತೆ ಮಂದಹಾಸವಿತ್ತು, ಎನೂ ಆಗಲಿಲ್ಲವೆಂಬಂತೆ. ಕೆಂಪಡರಿದ ನನ್ನ ಕಣ್ಣುಗಳನ್ನು ನೋಡಿದ ಅವಳು ಕೇಳಿದಳು "ಏನಾಯಿತು?". ಮಾತು ಹೊರಡದಿದ್ದಾಗ ಬಾ ಎಂದು ಕರೆದುಕೊಂಡು ಎಂದಾದರೊಮ್ಮೆ ಕೂರುತ್ತಿದ್ದ ಮರದ ಕಟ್ಟೆಯ ಮೇಲೆ ಹೋಗಿ ಕುಳಿತೆ.ಮಾತಾಡಲಾರದ ನನ್ನ ಪರಿಸ್ಥಿತಿ ನೋಡಿದ ಅವಳೇ ಮಾತಾಡಿದಳು.ಈ ವರ್ಷ ನನ್ನ ಮದುವೆಮಾಡುತ್ತಾರೆಂದೂ, ಮುಂದೆ ಓದುವುದು ಇಷ್ಟವಿಲ್ಲವೆಂದೂ ಹೇಳಿದಳು. ಇದ್ದ ಧೈರ್ಯವನ್ನೆಲ್ಲಾ ಒಗ್ಗೂಡಿಸಿ ಒಂದೇ ಮಾತು ಕೇಳಿದೆ,"ನಾನೆಂದರೆ?".
ಬೆಚ್ಚಿಬಿದ್ದಂತಾದಳು."ನಾನು ನಿನ್ನನ್ನು ಆ ದೃಷ್ತಿಯಲ್ಲಿ ಎಂದೂ ನೋಡಿಲ್ಲ. You are a true friend for me."

ಒಂದು ಅಧ್ಯಾಯ ಮುಗಿದಿತ್ತು.

ಮುಂದೆ ನಡೆದಿದ್ದೆಲ್ಲಾ ಬರಿಯ ದುರಂತಗಳೇ. ನಾನು ಹೇಗೋ ಪಾಸಾಗಿ, ಬೆಂಗಳೂರಿಗೆ ಬಂದು ಸೇರಿದ್ದೆ. ಅವಳ ಮದುವೆಯಾಗಿತ್ತು.
2 ವರ್ಷದ ಹಿಂದೆ ದೀಪಾವಳಿಯಂದು ಸಿಕ್ಕಿದ್ದಳು. ಎಂದಿನಂತೆ ಮಾತಾಡಿದಳು. ಆದರೆ ನನಗೆ ಎಂದಿನಂತೆ ಮಾತಾಡಲಾಗಲಿಲ್ಲ. ಏನೆಂದುಕೊಂಡಳೋ ಏನೋ.
ಮಳೆಯ ಬಿರುಸು ಜೋರಗಿತ್ತು. ಬೀಸುವ ಗಾಳಿ ತಣ್ಣಗೆ ಕೊರೆಯುತ್ತಿತ್ತು.
ಹೌದು.. ನಾನು ಮಾಡಿದ್ದು ಸರಿಯೇ..? ತಾನು ಮಾಡಿದ್ದ್ಯು ತಪ್ಪೆಂದು ಯಾರು ತಾನೆ ಒಪ್ಪಿಕೊಳ್ಳುತ್ತಾರೆ..?ಅದು ನಿಜವಾಗಿಯೂ ಪ್ರೀತಿಯಾಗಿತ್ತೇ.? ಇಲ್ಲಾ ಬರಿಯ ಆಕರ್ಷಣೆಯೇ..?ಇಲ್ಲ ಅದು ಬರಿಯ ದೈಹಿಕ ಆಕರ್ಷಣೆಯಾಗಿರಲಿಲ್ಲ್ಲ. ಮತ್ತೇನದು..? ಗುಪ್ತ ಮನಸ್ಸಿನ ಸುಪ್ತ ಆಸೆಗಳೇ..? ಅವಳು ನನ್ನವಳಾಗಬೇಕೆಂಬ ಬಯಕೆಯೇ.? ನಿಜವಾಗಿ ನನ್ನಲ್ಲಿ ಏನಿತ್ತು ಆ ಸಮಯದಲ್ಲಿ..? ಅವಳೇನಾದರೂ ಒಪ್ಪಿದ್ದರೆ ಮದುವೆಯಾಗಲು ನಾನಗೆ ಸಾಧ್ಯವಾಗುತ್ತಿತ್ತೆ..? ಖಂಡಿತವಾಗಿಯೂ ಆಗುತ್ತಿರಲಿಲ್ಲ. ಇನ್ನೂ ಡಿಗ್ರಿ ಮಾಡುತ್ತಿದ್ದ ನನಗೆ ಮದುವೆಯ ಯೋಚನೆಯೇ..?ಅವಳು ನನಗಾಗಿ ಮದುವೆಯಾಗದೆ ಕಾಯುವುದು ಸಾಧ್ಯವಿತ್ತೇ..? ಅಸಾಧ್ಯಕ್ಕೆ ಹತ್ತಿರವಾದ ಮಾತದು. ಯಾಕೆಂದರೆ ನಾನು ಮದುವೆಗೆ ಸಿದ್ದನಾಗಲು ಇನ್ನೂ 4-5 ವರ್ಷಗಳಾದರೂ ಬೇಕು. ಇದನ್ನೆಲ್ಲಾ ಯೋಚಿಸಿದ್ದೆನಾ ನಾನು..? ಯಾಕೆ ಯೋಚಿಸಲಿಲ್ಲ..? ಕಣ್ಣಿನಲ್ಲಿ ತುಂಬಿದ್ದ ಯೌವ್ವನದ ಕನಸುಗಳು ವಾಸ್ತವತೆಯನ್ನು ಮರೆಮಾಚಿದವೇ.? ಹೌದು. ವಾಸ್ತವವನ್ನು ಅರಿಯಲು ನಾನೆಂದೂ ಪ್ರಯತ್ನಿಸಲಿಲ್ಲ. ಅದು ನನ್ನ ತಪ್ಪೇ.? ಅಥವಾ ಪರಿಸ್ಥಿತಿ ಹಾಗಿತ್ತೆ..?
ಮಳೆಕಡಿಮೆಯಾಗುವ ಲಕ್ಷಣಗಳು ಕಾಣುತ್ತಿತ್ತು.
ಮನಸ್ಸು ಗೊಂದಲಗೊಂಡಿತ್ತು.ಹೌದು ಅಂದು ಸುದ್ದಿ ತಿಳಿದ ನಾನೇಕೆ ವ್ಯಾಕುಲಗೊಂಡಿದ್ದೆ. ಅವಳು ಮದುವೆಯಾಗುತ್ತಾಳೆಂದೇ..?
Exactly..!!
ಅಂದರೆ ಮದುವೆಯೇ ಪ್ರೀತಿಯ ಗುರಿಯಾಗಿತ್ತೇ.?
Oh.. God..!!
ಏನು ಯೋಚನೆಯಿದು.. ನಾನೇಕೆ ಹೀಗಾದೆ..?ನಿಧಾನವಾಗಿ ಯೋಚಿಸಿದಾಗ ಒಂದೊಂದು ಸ್ಪಷ್ಟವಾಗತೊಡಗಿತು.ನಿಜ, ಮದುವೆ ಪ್ರೀತಿಯ ಗುರಿಯಲ್ಲ. ಯಾವುದೇ ಗುರಿಯಿಲ್ಲದ, ಉದ್ದೇಶವಿಲ್ಲದ ನಿರಂತರ ಅನುಬಂಧವೇ ಪ್ರೀತಿ. ಪ್ರೀತಿಸಿದವರನ್ನೆಲ್ಲಾ ಮದುವೆಯಾಗಲಾಗುವುದಿಲ್ಲ. ಈ ಸತ್ಯವನ್ನರಿತರೂ ಹೀಗೇಕೆ..? ಸಿನಿಮಾಗಳಲ್ಲಿ ಬಳಸುವ LOVE ತನ್ನ ಪ್ರಭಾವ ಬೀರಿರಬೇಕು.
ಅರ್ಥ ಗೊತ್ತಿಲ್ಲದ ಪಡ್ಡೆ ಹುಡುಗರನ್ನು ಕೆರಳಿಸುವ ಪದಗಳವು. ಸಿನಿಮಾದವರಿಗೆ ಬಂಡವಾಳವಿದು.
ಮಳೆ ಸಣ್ಣಗೆ ಜುಮುರುತ್ತಿತ್ತು.
ಓಹ್.. Next week ಅವಳ wedding anniversary. ಒಂದು ಒಳ್ಳೆಯ Greeting Card ಕಳಿಸಬೇಕು. ಸಾದ್ಯವಾದರೆ ಫೋನ್ ಮಾಡಿ Sorry ಕೇಳಬೇಕು. ಅದು ಅಷ್ಟು ಸುಲಭದ ಕೆಲಸವಲ್ಲ. ಆದರೂ ಕೇಳಬಲ್ಲೆನೆಂಬ ಆತ್ಮವಿಶ್ವಾಸವೂ, ಅವಳು ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾಳೆಂಬ ನಂಬಿಕೆಯೂ ಇತ್ತು.
ಬೆಂಗಳೂರು ಬಂದಿತ್ತು. ಮಳೆ ನಿಂತು ಆಕಾಶ ಶುಭ್ರವಾಗಿತ್ತು, ಭೂಮಿ ತಂಪಾಗಿತ್ತು.
ಮನಸೂ..