Thursday, March 20, 2008

City Marriage

ಲವ್ ಮ್ಯಾರೆಜ್, ಆರೇಂಜ್ಡ್ ಮ್ಯಾರೇಜ್ ಕೇಳಿದ್ವಿ ಇದ್ಯವ್ದು ಹೊಸಾ ಥರದ್ದು ಅಂತ ಆಶ್ಚರ್ಯ ಪಡಬೇಕಿಲ್ಲ. ಇದೂ ಅವೆರಡರಲ್ಲಿ ಒಂದು.
ನಮ್ಮ್ ಆಫೀಸ್ ಎದುರು ಇರುವ ಕಲ್ಯಾಣ ಮಂಟಪದಲ್ಲಿ (ಚೌಲ್ಟ್ರಿ) ಸಾಧಾರಣಾವಾಗಿ 2-3 ದಿನಕ್ಕೊಂದು ಮದುವೆ ಇದ್ದದ್ದೆ. ಇವತ್ತೂ ಯಾವುದೋ ಒಂದು ಮದುವೆ ನಡೆಯುತ್ತಿದೆ. ಆಗೆಲ್ಲಾ ನಮ್ಮ ಹಳ್ಳಿ ಕಡೆಯ ಮದುವೆ ಮನೆ ನೆನಪಾಗುತ್ತದೆ.

ಸುಮಾರು 20 ವರ್ಷದ ಹಿಂದೆ.
ನಮ್ಮೂರು ಸುಮಾರು 10-12 ಕುಟುಂಬಗಳಿರುವ ಒಂದು ಸಣ್ಣ ಊರು. ನಮ್ಮೂರಲ್ಲಿ ಮದುವೆ ಒಂದು ಮನೆಯ ಕಾರ್ಯಕ್ರಮವಾಗಿರುತ್ತಿರಲಿಲ್ಲ. ಅದು ಇಡೀ ಊರಿನ ಹಬ್ಬದಂತಿರುತ್ತಿತ್ತು. ಮದುವೆ ತಾರೀಖು ನಿಶ್ಚಯವಾದ ದಿನವೇ ಮನೆಯ ಯಜಮಾನು ಬಂದು ಎಲ್ಲ ವಿಚಾರಗಳನ್ನೂ ಹೇಳಿದ. ಅಲ್ಲೇ ಅಡ್ಡಾದುತ್ತಿದ್ದ ನನಗೆ "ಅಪ್ಪೀ ಮುಂದಿನ ತಿಂಗ್ಳು ಯಮ್ಮನೆ ಅಪ್ಪಿದು ಮದ್ವೆ. ನಿಂಗೆ ಪರೀಕ್ಷೆ ಎಲ್ಲಾ ಮುಗ್ದಿರ್ತು ಅಲ್ದಾ ಅಶ್ಟೋತ್ತಿಗೆ ಇಲ್ದಿದ್ರೆ ನಿಮ್ಮ ಮೇಷ್ಟ್ರಿಗೆ ಹೇಳು 4 ದಿನ ರಜ ಬೇಕು ಅಂತ" ಅಂದ. ಅವತ್ತಿಂದನೇ ಮನೆಯಲ್ಲೆಲ್ಲ ಏನೋ ಒಂದು ತರದ ಸಡಗರ.
"ಹೆಬ್ಬಗಿಲು ಕಟ್ಟೆ ಸರಿ ಮಾಡ್ಸವು, ಗ್ವಾಡಿಗೆ ಸುಣ್ಣಹಚ್ಸವು, ಭಟ್ರಮನೆ ಮಾಣಿದು ಮದ್ವೆ ಇದ್ದು ಮುಂದಿನ ತಿಂಗ್ಳು. ಹಂಗಾಗಿ ಅಡ್ಕೆ ಸುಲಿಯಕ್ಕೆ ಬರಕ್ಕೆ ಹೇಳವು. ಅಡ್ಕೆ ಎಲ್ಲಾ ಶೆರ್ವೆ ಮಾಡಿದ್ರೆ ಚೊಕ್ಕ ಆಗ್ತು ಇಲ್ದಿದ್ರೆ ಮನೆಯೆಲ್ಲ ಧೂಳು ಹರ್ಗಾಣ" ಅಂತ ಅಪ್ಪ, "ಅವ್ರ ಮನೆಲಿ ಮದ್ವೆ ಬಂತಲೇ ಹಂಗಾಗಿ ಕಾಳ್ಕಡಿಯೆಲ್ಲಾ ಬೇಗ ತರ್ಸಿ ಸೇರ್ಸಿ ಇಡವು. ಕೊನಿಗೆ ಮಳೆ ಹಿಡ್ಕಂಡ್ರೆ ಕಷ್ಟ" ಅಂತ ಅಮ್ಮ ಮದುವೆ ತಯಾರಿಯಲ್ಲಿದ್ದರೆ, ಮದ್ವೆ ಮನೆಗೆ ಅವ್ರ ಮನೆ ಮೊಮ್ಮಕ್ಕಳೆಲ್ಲ ಬರ್ತ ಎಲ್ಲಾ ಸೇರ್ಕಂಡು ಎನ್ ಮಾಡದು ಅನ್ನೋ ಪ್ಲಾನ್ ನನ್ದು.

ಮದುವೆ ದಿನಗಳು ಹತ್ತಿರ ಬರುತ್ತಿದ್ದಂತೆ ಊರೆಲ್ಲಾ ಸಡಗರ, ಎಲ್ಲರ ಮನೆಯೆದುರು ಕಸಕಡ್ಡಿ ಗುಡಿಸಿ, ಸಾರಿಸಿ ಸ್ವಚ್ಚವಾಗಿತ್ತು. ಭಟ್ರ ಮನೆಯೆದುರು ಅಡಿಕೆ ಮರ ಸೋಗೆಯ ಚಪ್ಪರ, ಹಿತ್ತಲ ಅಂಗಳದಲ್ಲಿ ಡೊಡ್ಡ ಊಟದ ಚಪ್ಪರ ರೆಡಿಯಾಗಿತ್ತು. ಆ ಚಪ್ಪರದಲ್ಲೇ "ಅಲ್ಲಿ ಓಡಡಿ ಇವತ್ತಶ್ಟೇ ತೊಡದ್ದ ಜಾರ್ಕ್ಯಂದು ಬೀಳ್ತಿ" ಅಂತ ಬಯ್ಯುವವರ ಮಧ್ಯೆ ನಮ್ಮ ಕಂಬಕಂಬದಾಟ.

ಮದುವೆ ಮನೆಯಲ್ಲಿ ಮದುವೆಯ ಹಿಂದಿನದಿನದ "ದೊನ್ನೆ ಬಾಳೆ" ಕಾರ್ಯಕ್ರಮದ್ದು ತನ್ನದೇ ಆದ ವಿಶೇಷತೆ. ಊರ ಗಂಡಸರೆಲ್ಲಾ ಸೇರಿ ಬಾಳೆಯೆಲೆಗಳನ್ನು ಸರಿಪಡಿಸುವುದು, ಅಡಿಕೆ ಕತ್ತರಿಸುವುದು ಅದಾದ ಮೇಲೆ ಅವಲಕ್ಕಿ, ಕಷಾಯದ ಸಮಾರಾಧನೆ. ಆ ಸಮಯಕ್ಕೆ ಸರಿಯಾಗೆ ನಾವೆಲ್ಲಾ ಆಟ ಮುಗಿಸಿ ಹಾಜರ್.

ಮುಂದಿನದು ದಿಬ್ಬಣ. "ಅಪ್ಪೀ ಬೇಗ ಮಲ್ಗು. ಬೆಳಿಗ್ಗೆ ಬೇಗ ಏಳವು. 7ಘಂಟೆಗೇ ದಿಬ್ಬಣ ಬಸ್ಸು ಹೊರ್ಡ್ತು. ಬೇಗ ಎದ್ರೆ ಸ್ನಾನ ಇಲ್ದಿದ್ರೆ ಇಲ್ಲೆ" ಅನ್ನೋ ವಾರ್ನಿಂಗ್ ರಾತ್ರಿಯೇ ಆಗಿತ್ತು. ಅಂತೂ ಬೇಗ ಎದ್ದು ಸ್ನಾನ ಮಾಡಿ 6 ಘಂಟೆಗೆ ದಿಬ್ಬಣದ ಬಸ್ಸಿನ ದಾರಿ ಕಾಯುವುದು ಯಾಕೆಂದರೆ ಮುಂದಿನ ಸೀಟಿಗಾಗಿ ತುಂಬಾ ಕಾಂಪಿಟೇಶನ್ ಇತ್ತು. ದಿಬ್ಬಣವೇ ಒಂದು ಮಜ. ನಾನಾ ಬಗೆಯ ಹಾಡುಗಳು, ಹಿಂದೆ ಕುಳಿತ "ಡೊಡ್ಡ ಹುಡುಗರ" ಪೋಲಿ ಜೋಕುಗಳು, ಮುಂದೆ ಕುಳಿತ ನಮ್ಮ ಕೂಗಾಟ, ಚಳ್ಳೆ ಪಿಳ್ಳೆ ಹುಡುಗರ ರಗಳೆ, ಹೆಣ್ಣುಮಕ್ಕಳ ಹಾಡು, ಅಮ್ಮುಮ್ಮ ಅಜ್ಜಿಯರ ಮಾತು ಇವುಗಳ ನಡುವೆ ದಾರಿ ಸಾಗಿದ್ದೇ ಗೊತ್ತಾಗುವುದಿಲ್ಲ.
ಮದುವೆಮನೆಗೆ ಬಂದ ಮೇಲೆ ತಿಂಡಿ,ಕಾಫಿ,ಟೀ,ಶರಬತ್ ಗಳ ಸೇವೆ. ಅಲ್ಲೆ ನಮ್ಮ ಶರಬತ್ ಕುಡಿಯುವ ಕಾಂಪಿಟೇಶನ್."ಜಾಸ್ತಿ ಕುಡಿಯಡ ಥಂಡಿ ಆಗ್ತು, ಅಲ್ದೇ ಊಟ ಸೇರದಿಲ್ಲೆ" ಅನ್ನುವ ಬುದ್ದಿಮಾತು ಕಿವಿಗೆ ಬೀಳುವುದು ಅಪರೂಪ. ಯಾಕೆಂದರೆ ಬೇರೆಯವರ ಮನೆಗೆ ಹೋದಾಗ ಬಯ್ಯುವುದಿಲ್ಲ "ಖರ್ಚಿಗೆ" ಬೀಳುವುದಿಲ್ಲವೆಂಬ ಮೊಂಡು ಧೈರ್ಯ.
ಮುಂದಿನದು ಊಟ. ಅಲ್ಲೂ ಸ್ವೀಟ್ ತಿನ್ನುವ, ಗ್ರಂಥ ಹೇಳಿದರೆ ಯಾರು ದೊಡ್ಡದಾಗಿ ಜಾಸ್ತಿ ಹೊತ್ತು "ಹರ ಹರ ಮಹದೇಏಏಏಏಏ.......ವ" ಹೇಳುವುದು ಅಂತ ಕಾಂಪಿಟೇಶನ್. ಊಟ ಮಾಡಿದಮೇಲಿನ ಗಮನವೆಲ್ಲಾ ವಾಪಾಸ್ ಬರುವುದರ ಮೇಲೆ.

ಮರುದಿನದ ಕಾರ್ಯಕ್ರಮ "ವಧೂ/ಗೃಹ ಪ್ರವೇಶ". ನಂತರ "ಮರುವಾರಿ".
ಹೀಗೆ "ನಾಂದಿ", "ಮದುವೆ",ವಧೂ/ಗೃಹ ಪ್ರವೇಶ","ಮರುವಾರಿ" ಅಂತೆ 4-5 ದಿನಗಳು ಸಂಭ್ರಮದಿಂದ ನಡೆಯುತ್ತಿತ್ತು. ಈಗ ಮದುಮಕ್ಕಳು ಬಂದಮೇಲೆ XYZ weds XYZ. XYZ ಕುಟುಂಬದವರಿಂದ ಸ್ವಾಗತ ಎಂಬ ಹೂವಿನ ಬೋರ್ಡ್ ಹಾಕಿ, ಊಟ ಮುಗಿದು ಮದುಮಕ್ಕಳು ಇನ್ನೂ ಇರುವಾಗಲೇ ಮತ್ತೊಂದು ಮದುವೆಯ ಬೋರ್ಡ್ ಹಾಕಲು ಸಿದ್ದತೆ ನಡೆದಿರುತ್ತದೆ.

4-5 ದಿನ ಮದುವೆ ಮಾಡಿಕೊಳ್ಳೋಕೆ ಟೈಮ್ ಇಲ್ಲ ಸಾರ್...

ನಿಜ. ವೇಗವಾಗಿ ಓಡುತ್ತಿರುವ ನಮ್ಮ ಜೀವನದಲ್ಲಿ ಮದುವೆಯೆಂಬ ಅತ್ಯಂತ ಅಮೂಲ್ಯವಾದ ಕಾರ್ಯಕ್ರಮಕ್ಕಾಗಿ 4-5 ದಿನಗಳನ್ನು "ವೇಸ್ಟ್" ಮಾಡಲು ನಾವು ಸಿದ್ದರಿಲ್ಲ. ಇದರೊಂದಿಗೆ 'ವೆಡ್ಡಿಂಗ್','ಮ್ಯಾರೇಜ್','ರಿಸೆಪ್ಶನ್'ಗಳ
ನಡುವೆ ನಾವು 'ಚಪ್ಪರ', 'ತೋರಣ','ಕೋರಿ ಊಟ', 'ಅರಿಸಿನ ಸ್ನಾನ', 'ಹಾನ', 'ನಾಂದಿ', 'ಗೃಹ ಶಾಂತಿ', 'ಉದಕ ಶಾಂತಿ', 'ದೊನ್ನೆ-ಬಾಳೆ', 'ಮರುವಾರಿ', 'ಓಕಳಿ' ಮುಂತಾದ ಶಬ್ದಗಳ ಅರ್ಥವನ್ನೇ ಮರೆತರೂ ಆಶ್ಚರ್ಯವಿಲ್ಲ.

ಓಹ್ ಮದುವೆ ಮುಗಿದಿರಬೇಕು, ಒಂದೆರಡು ಕಾರುಗಳು ಮಾತ್ರ ಕಾಣುತ್ತಿದೆ. ಬೋರ್ಡ್ ಕೆಳಗಿಳಿದಿದೆ, 2-3 ಜನ ಹೂವುಗಳನ್ನು ಕೀಳುತ್ತಿದ್ದಾರೆ, ಪಕ್ಕದಲ್ಲೇ ಮತ್ತೊಂದು ಬೋರ್ಡ್ ತಯಾರಾಗುತ್ತಿದೆ.